Friday, 22 February 2013

ನಾನು, ಪಕ್ಕದ್ಮನೆ ತಮ್ಮ ಮತ್ತು ನಾಯಿ ಮರಿ...!


ನನಗೆ ಮೊದಲಿನಿಂದನೂ ಯಾಕೋ ಮನುಷ್ಯರಕಿಂತ ಜಾಸ್ತಿ ಪ್ರಾಣಿಗಳ ಮೇಲೆ ಪ್ರೀತಿ. ಎಲ್ಲಿ ಬೆಕ್ಕು ನಾಯಿಗಳ ಮರಿ ಕಾಣಲಿ ಅವುಗಳನ್ನ ಮುದ್ದು ಮಾಡದೇ ಬರಲು ಸಾಧ್ಯವಿಲ್ಲ. ಹತ್ತು ಹನ್ನೆರಡು ವರ್ಷವಿದ್ದ ಸಮಯದಲ್ಲಿ ಪಕ್ಕದ ಮನೆ ಹುಡುಗನೊಡನೆ ಸೇರಿಕೊಂಡು ಕಂಡ ಕಂಡಲ್ಲಿಂದ ನಾಯಿ ಮರಿಗಳನ್ನು ಎತ್ತಿಕೊಂಡು ಬಂದು ಸಾಕಲು ಪ್ರಯತ್ನಿಸಿದ ನೆನಪುಗಳಿವೆ. ಆದರೆ ನನ್ನಮ್ಮನದು ಒಂದೇ ರಾಗ. "ನೀನು ಬೆಕ್ಕಿನ ಮರಿ, ನಾಯಿ ಮರಿಗಳನ್ನು ತಂದು ಸಾಕಿಕೊಂಡರೆ ಅದರ ಹೊಲಸು ಚೊಕ್ಕ ಮಾಡದು ಯಾರು? ನೀನೆ ಮಾಡ್ತೆ ಹೇಳಾರೆ ಸಾಕಲಡ್ಡಿಲ್ಲೆ" ಅಂತ. ಅದನ್ನೂ ಒಮ್ಮೆ ಮಾಡಿ ನೋಡಾಯ್ತು. ಬೆಳಿಗ್ಗೆ ೭ ಘಂಟೆಗೆ ಎದ್ದು ನಾಯಿಮರಿ ಹುಡುಕಲು ಪಕ್ಕದ್ಮನೆ ತಮ್ಮನ ಕರ್ಕೊಂಡು ಹೋಗಾಯ್ತು. (ಬೆಳಿಗ್ಗೆ ಹೊತ್ತಿನಲ್ಲಿ ನಾಯಿ ಮರಿಗಳು ವಾಕಿಂಗ್ ಬರುತ್ತವೆ. ಹುಡುಕಲು ಸಸಾರ ಅನ್ನೋ ಥಿಯರಿ ನಮ್ಮದು). ಅಂತು ತಾಯಿ ನಾಯಿಯ ಕಣ್ಣು ತಪ್ಪಿಸಿ, ಒಂದು ಬೆಳ್ಳನೆಯ ತೆಳ್ಳನೆಯ ನಾಯಿ ಮರಿಯನ್ನು ಹಿಡಿದುಕೊಂಡು ಬಂದು ಆಯ್ತು. ಅದಕ್ಕೆ ಜೋನಿ ಎಂಬ ನಾಮಕರಣವೂ ಆಯ್ತು. ಅದು ತನ್ನ ನಿತ್ಯಕರ್ಮಗಳನ್ನ ಹೊತ್ತು ಗೊತ್ತಿಲ್ಲದೆ ಮಾಡಿದಾಗ ನಾನು ಮತ್ತು ಪಕ್ಕದ್ಮನೆ ತಮ್ಮ ಒಬ್ಬರನ್ನೊಬ್ಬರ ಮುಖ ನೋಡುತ್ತ ಕುಳಿತುಕೊಳ್ಳುತ್ತಿದ್ದೆವು. ನಮ್ಮ ಹೆತ್ತ ತಪ್ಪಿಗೆ ಅಮ್ಮಂದಿರು ಕ್ಲೀನಿಂಗ್ ಕೆಲಸವನ್ನೂ ಮಾಡಬೇಕಾಯ್ತು.

ಜೋನಿ


ಜೋನಿ ಮೊದಲೇ ಚುರುಕು. ಒಬ್ಬರ ಚಪ್ಪಲ್ಲನ್ನು ಇದ್ದಲ್ಲಿ ಬಿಡುತ್ತಿರಲಿಲ್ಲ. ಅವುಗಳನ್ನು ಕಚ್ಚಿ ಕಚ್ಚಿ ತುಂಡು ಮಾಡುವವರೆಗೂ ಅದಕ್ಕೆ ಸಮಾಧಾನವು ಇರುತ್ತಿರಲಿಲ್ಲ. ನಮಗೋ ಅದರ ಚೂಪಾದ ಹಲ್ಲಿನ ಬಗ್ಗೆ ಒಳಗೊಳಗೆ ಹೆಮ್ಮೆ. ಸುತ್ತಮುತ್ತಲಿನವರು ಅದನ್ನ ಶಪಿಸಿದರೂ ಜೋನಿ ನಮ್ಮ ಕಣ್ಮ್ಣಣಿಯಾಗಿತ್ತು. (ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನೋ ಹಾಗೆ). ಹೀಗೆ ನಮ್ಮ ಮನ ಗೆದ್ದಿದ್ದ ಜೋನಿ ಒಂದು ದಿನ ಮುಂದಿನ ಮನೆಯ ಅಂಕಲ್ ಅವರ ಗಾಡಿ ಸೀಟ್ ಅನ್ನು  ರಾತ್ರಿ ಕಚ್ಚಿ ಕಚ್ಚಿ ಹರಿದು ಹಾಕಿತು. ಬೆಳಗ್ಗೆ ನೋಡೋತನಕ ಆ ಅಂಕಲ್ ಜೋನಿಯನ್ನ ಚೀಲದಲ್ಲಿ ತುಂಬಿಸಿಕೊಂಡು ಹೋಗಿ ದೂರದ ಕುಮಟಾ ರಸ್ತೆಯಲ್ಲಿ ಬಿಟ್ಟು ಬಂದಿದ್ದರು. ವಾಸನೆ ಮೂಸಿಕೊಂಡು ಬರಬಹುದೆಂಬ ನಿರೀಕ್ಷೆಯಲ್ಲಿ ೨-೩ ದಿನ ಕಾದೂ ನೋಡಿದೆವು. ಕೊನೆಗೂ ಬರದಿದ್ದಾಗ ಬೇರೆ ದಾರಿಯಿಲ್ಲದೆ ಮತ್ತೆ ಬೆಳಿಗ್ಗೆ ೭ ಘಂಟೆಗೆದ್ದು ನಾಯಿ ಮರಿ ಹುಡುಕಲು ಹೊರಟೆವು.

ಸೋನು


ಚಿನ್ನು, ಕಜ್ಜಿ ಮೈಯ್ಯ ಸೋನು, ರಾಜು, ಕರಿಯಾ ಹಾಗೆ ಹಲವು ಮರಿಗಳು ಬಂದು ಹೋದವು. ಆಮೇಲೆ ಬಂದ ಪಿಂಕಿ ಒಳ್ಳೆ ಗುಣದ ಪಿಂಕಿ ವರ್ಷದ ಕಾಲ ನಮ್ಮ ಜೊತೆಗಿತ್ತು. ಕೇಕ್ ಚೊಕ್ಲೇಟ್, ಹಣ್ಣು, ಐಸ್ ಕ್ರೀಮ್ ಹೀಗೆ ನಾವು ತಿನ್ನುತ್ತಿದ್ದ ಎಲ್ಲವನ್ನು ತಿನ್ನುತ್ತ ಆಡುತ್ತ ಇರುತ್ತಿದ್ದ ಪಿಂಕಿ ಅಕ್ಕ ಪಕ್ಕದ ಬೀದಿಯ ಹುಡುಗರೆದುರು ನಮ್ಮ ಗೌರವವನ್ನ ಹೆಚ್ಚಿಸಿತ್ತು. ಆದರೆ ಆ ದೇವರು ಆ ಖುಷಿಯನ್ನ ಹೆಚ್ಚು ದಿನ ಕೊಡಲಿಲ್ಲ. ಕೊನೆಗೆ ಒಂದು ದಿನ ಪಿಂಕಿ ನಮಗೆ ಅದರ ನೆನಪನ್ನಷ್ಟೆ ಉಳಿಸಿ ಕೊನೆ ಉಸಿರೆಳೆಯಿತು. ಅಂದು ಅತ್ತಿದ್ದಕ್ಕೇ ಲೆಕ್ಕವಿಲ್ಲ. ಪಿಂಕಿ ನಮ್ಮ ಮನಸ್ಸಲ್ಲಿ ತನ್ನ ಛಾಪು ಮೂಡಿಸಿ ಹೋಗಿತ್ತು.

ಪಿಂಕಿ


ಈ ಘಟನೆಯ ನಂತರ ಮತ್ತೆ ನಾಯಿ ಮರಿಯನ್ನ ಸಾಕುವ ಧೈರ್ಯ ಬರಲಿಲ್ಲ. ಇದೆಲ್ಲಾ ಆಗಿ ಈಗೊಂದು ೧೫ ವರ್ಷ ಆಯ್ತು. ನಾನು ಕಂಪ್ಯೂಟರ್ ಎದುರಲ್ಲಿ ಕೂತು ಕಿಟಿ ಕಿಟಿ ಮಡುತ್ತಿರುತ್ತೇನೆ.ನನ್ನ ನಾಯಿಮರಿ ಹುಡುಕುವ ಕೆಲಸದಲ್ಲಿ ಸಾಥ್ ನೀಡುತ್ತಿದ್ದ ತಮ್ಮ ಎಲ್ಲೋ ಬೇರೆಡೆ ತನ್ನ ಗುರಿಯೆಡೆ ಸಾಗುತ್ತಿದ್ದಾನೆ. ಈಗ ಮತ್ತೆ ನಾಯಿ ಮರಿ ಬೇಕು ಅನ್ನಿಸುತ್ತಿದೆ. ಆದರೆ ಬಾಲ್ಯದ ನೆನಪಲ್ಲಿ ಅಚ್ಚಳಿಯದೆ ಉಳಿದ ಜೋನಿ, ಚಿನ್ನು, ಸೋನು, ರಾಜು, ಕರಿಯಾ, ಪಿಂಕಿಗಳು ಮತ್ತೆ ಮತ್ತೆ ಕಾಡುತ್ತಿವೆ.

ಬಾಲ್ಯದ ಸವಿಯ ಸವಿಯುತ್ತಾ

-    ಕಾವ್ಯಧಾರೆ


ಸುರಪಾನ...!


ಶಿರಸಿಯಲ್ಲೊಂದು ಬಾಡಿಗೆ ಮನೆ. ಮನೆಯ ಯಜಮಾನ ಎಂ.ಫಿಲ್. ನಲ್ಲಿ ಬಂಗಾರದ ಪದಕ ಪಡೆದಂತ ಬುದ್ದಿವಂತ. ಎಲ್ಲ ಬುದ್ದಿವಂತರಂತೆ ಆತನಿಗೂ ತನ್ನ ಸ್ವಂತ ಉದ್ದಿಮೆಯನ್ನು ಮಾಡುವ ಕನಸು. ಅದನ್ನು ನನಸು ಮಾಡುವ ನಿಟ್ಟಿನಲ್ಲೇ ಪ್ರಾರಂಭಿಸಿದ ಲೈಬ್ರರಿ. ಊರಿನ ಮಕ್ಕಳು, ಯುವಕ ಯುವತಿಯರು, ಹೆಂಗಳೆಯರ ಹಾಗೂ ಬುದ್ದಿ ಜೀವಿಗಳ ನೆಚ್ಚಿನ  ತಾಣ ಈತನ ಕನಸಿನ ಕೂಸು. ಇನ್ನು ಮನೆಯ ಒಡತಿ ಸಹ ಎಲ್ಲ ಮನೆ ಮರಿಗೆಯ ಕೆಲಸಗಳನ್ನು ಪಟ್ಟಾಗಿ ಮಾಡಿ, ಸಂಗೀತ ಅಭ್ಯಾಸವನ್ನು ಮಾಡಿ, ಗಂಡನ ಬರುವನ್ನು ಕಾಯುವಂತಹ ಸದ್ಗೃಹಿಣಿ. ಅವರಿಗೊಂದು ಎರಡು ಮಳೆಗಾಲವನ್ನು ನೋಡಿದ ಪುಟ್ಟ ಮಗು. ನಮ್ಮ ಮಗ ಬೆಳೆದು ಹೆಸರು ತರಬೇಕು, ಎಲ್ಲರಗಿಂತ ಮುಂದಿರಬೇಕು ಅಂತೆಲ್ಲ ಕನಸು ಕಟ್ಟತಾ ಇದ್ದ ಈ ಕುಟುಂಬ ಸ್ವರ್ಗಕ್ಕೇ ಕಿಚ್ಚು ಹಚ್ಚೋ ತರಹ ಇತ್ತು.
ಅಂದು ಮನೆಗೆ ಬಂದ ಯಜಮಾನ ಹೆಂಡತಿಗೆ  ಹೇಳ್ತಾ ಇದ್ದಾ. "ಇತ್ತೀಚಿಗೆ ಯಾಕೋ ನನ್ನ ಸಂಪಾದನೆ ಕಮ್ಮಿ ಆಗ್ತಿದೆ, ಕುಟುಂಬ ನಡೆಸೋಕೆ ಸಾಕಗತ್ತೋ ಇಲ್ವೋ , ನೀನು ಕೆಲಸಕ್ಕೆ ಸೇರ್ಕೋ ". ಈಕೆಗೆ ಚೆನ್ನಾಗಿ ಗೊತ್ತಿದ್ದ ವಿದ್ಯೆ ಸಂಗೀತ, ಸರಿ ಅದನ್ನೇ ಕಲಿಸೋಣ ಅಂತ ಅಲ್ಲೇ ಹತ್ತಿರದ ಒಂದು ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಸೇರಿಕೊಂಡಳು. ಹೀಗೆ ಸಾಗುತ್ತಿತ್ತು ಅವರ ಜೀವನದ ಬಂಡಿ.

ಹಾಗೆ ಮೂರು ನಾಕು ಮಳೆಗಾಲದ ನಂತರ, ಕೆಲಸ ಮುಗಿಸಿ ಮನೆಗೆ ಬಂದ ಈಕೆಗೆ ಮರುದಿನ ಹೋಗುತ್ತಿದ್ದ ಮದುವೆಗೆ ತವರು ಮನೆಯಲ್ಲಿ ಕೊಟ್ಟ ಬಂಗಾರದ ಸರ ಹಾಕಿಕೊಂಡು ಹೋಗುವ ಮನಸ್ಸಾಯಿತು. ಕಪಾಟು ತೆಗೆದು ನೋಡಿದರೆ ಸರದ ಸುಳಿವಿಲ್ಲ. ಗಂಡನನ್ನು ಕೇಳಿದಳು. ವಾರದ ಹಿಂದೆ ಮನೆಗೆ ಬಂದ ನಾದಿನಿಯನ್ನು ವಿಚಾರಿಸಿದಳು. ಎಲ್ಲರದು ಗೊತ್ತಿಲ್ಲವೆಂಬ ಉತ್ತರವೇ. ಬಾಲವಾಡಿಯಿಂದ ಬಂದ ಮಗನನ್ನು ’ಎಲ್ಲಾದರು ಆಟವಾಡಿ ಕಳೆದೆಯಾ?’ ಎಂದು ಕೇಳಿದಳು. ಪಾಪ..!! ಆ ಮುದ್ದು ಮಗು ಇಲ್ಲವೆಂಬಂತೆ ತಲೆ ಆಡಿಸಿತು. ಇಡಿ ಮನೆಯನ್ನೆಲ್ಲಾ ರೊಚ್ಚಿಗೆದ್ದು ಹುಡುಕಿದಳು. ಎಲ್ಲೂ ಸಿಗಲಿಲ್ಲ. ಕೊನೆಗೆ ತನ್ನ ಮರೆವನ್ನು ಶಪಿಸುತ್ತಾ ಮನಸಲ್ಲೆ ಕೊರಗಿದಳು.

ದಿನಕಳೆದಂತೆ ಮನೆಯಿಂದ ದುಡ್ಡು ಕಳವಾಗುತ್ತಿತ್ತು. ಅಂತೆಯೆ ಗಂಡನ ದುಡಿಮೆಯೂ ಇಳಿದಂತೆ ತೋರುತ್ತಿತ್ತು. ಹಾಗೋ ಹೀಗೋ ಇದ್ದಿದುರಲ್ಲೇ ಹೊಂದಿಸುತ್ತಾ ಸಂಸಾರ ತೂಗಿಸುತ್ತಿದ್ದಳು ಆಕೆ. ಗಂಡ-ಮಗನಿಗೆ  ಕಷ್ಟದ ಬಿಸಿ ತಟ್ಟದಂತೆ ತೂಗಿಸುವ ಜಾಣ್ಮೆ ಅವಳಲ್ಲಿತ್ತು.

ಹಾಗೆ ಒಂದು ದಿನ ಮನೆಗೆ ಬಂದಾಗ ಬಟ್ಟೆ ಒಣಗಿಸುವ ಹಗ್ಗ ನಾಪತ್ತೆಯಾಗಿತ್ತು. ಗಂಡನ ಚಪ್ಪಲ್ ಅಡ್ದಾದಿಡ್ಡಿಯಾಗಿ ಬಿದ್ದಿತ್ತು. ಮೊಬೈಲ್ ನೆಲದ ಮೇಲೆ ಮಲಗಿತ್ತು. ಮಗನ ಪಟ್ಟಿಯಲ್ಲಿನ ಹಾಳೆಯಲ್ಲಿ ಗಂಡ ಗೀಚಿದ ಪತ್ರವಿತ್ತು. ಆತ ಮನೆಯ ಎಲ್ಲ ಬಂಗಾರವನ್ನೂ ಒತ್ತೆಗಿಟ್ಟು ಶರಾಬೆಂಬ ನಕಲಿ ಅಮ್ರತದ ದಾಸನಾಗಿದ್ದ. ಹೆಂಡತಿ ಮಗನನ್ನು ಜೀವನ ಮುಗಿದರೂ ತೀರಿಸಲಾಗದಷ್ಟು ಸಾಲದ ಹೊರೆಯಲ್ಲಿಟ್ಟು ಹಗ್ಗಕ್ಕೆ ತಲೆಕೊಡಲು ದೂರ ದೂರಕ್ಕೆ ಸಾಗಿದ್ದ.ತಮ್ಮ ಜವಾಬ್ದಾರಿಯನ್ನು ಅರಿಯದೇ ದುಶ್ಚಟಕ್ಕೆ ಬಲಿಯಾಗುವ ಎಲ್ಲ ಮೂರ್ಖರನ್ನು ಖಂಡಿಸುತ್ತಾ
-ಕಾವ್ಯಧಾರೆ

(ಚಿಕ್ಕಂದಿನಲ್ಲಿ ಮನಸ್ಸನ್ನು ಘಾಸಿಗೊಳಿಸಿದ ನಿಜ ಘಟನೆ ಆಧಾರಿತ)

ನನ್ನಂತ ಮತ್ತೊಂದು ಹುಡುಗಿ..!!

"೫ % ರಿಯಾಯಿತಿ ಬೇಕು ಅಂದರೆ ಇನ್ನೂ ೧೦೦ ರೂಪಾಯಿಗಳ ಶೋಪ್ಪಿಂಗ್ ಮಾಡಬೇಕು.  ಏನನ್ನ್ ತಗೋಳೋದು? ಬೆಡ್ ಶೀಟ್?? ಶೋ ಪೀಸ್?? ಕೆಂಪಾ? ನೀಲಿನಾ?? " ಹೀಗೆ ೩೦ ನಿಮಿಷ ಜಾಬೋಂಗ್.ಕೊಮ್ ನ ಪೇಜನ್ನ ಹಿಂದೆ ಮುಂದೆ ತಿರುವಿ ಸ್ಕ್ರೀನ್ ಅನ್ನು ದಿಟ್ಟಿಸಿದ ಆಕೆ ಕೊನೆಗೆ ೩೦೦೦ ರೂಪಾಯಿಗಳ ಕೆಂಪು ಬ್ಯಾಗ್ ನ್ನು ತನ್ನ ಶೊಪ್ಪಿಂಗ್ ಕಾರ್ಟ್ಗೆ ಹಾಕಿ, ಕ್ಲಿಕ್ ಟು ಪ್ರೋಸೀಡ್ ಮಾಡಿದಳು.

-ಕಾವ್ಯಧಾರೆ

ಅವಳ ಗಂಡ
ಅವಳು ತನ್ನನ್ನು ತಾನು ಉದ್ದನೆಯ ಕನ್ನಡಿಯಲ್ಲಿ ನೋಡಿಕೊಂಡಳು. ಆಕೆಯ ಸೌಂದರ್ಯ ಎಂತಹ ನಿರಸಿಕನನ್ನೂ ಕೊಲ್ಲುವಂತಿತ್ತು. ಹಲವು ಮೇಕಪ್ ಇಟರೇಶನ್ಗಳ ನಂತರ ಕೊನೆಗೂ ಸಂತಸಗೊಂಡ ಆಕೆ ಗಂಡನ ಜೊತೆಗೆ ಪ್ರೇಮಿಗಳ ದಿನದ ರೊಮಾಂಟಿಕ್ ಕ್ಯಾಂಡಲ್ ಲೈಟ್ ಡಿನ್ನರ್ಗೆ ಹೊರಡಲು ಅನುವಾದಳು. "ನೀನೇ ನೀಈಈಈನೇ" ಎಂದು ಗುನುಗುತ್ತ ಹಾಲ್ಗೆ ನಡೆದ ಆಕೆಗೆ ಕಂಡಿದ್ದು ಸೋಫಾದ ಮೇಲೆ ಆಸೀನನಾಗಿದ್ದ ಆಕೆಯ ಗಂಡ. "ಇವತ್ತು ಭಾರತ-ಪಾಕಿಸ್ತಾನ ಮ್ಯಾಚ್ ಇದ್ದು ಮಾರಾಯ್ತಿ... ನಾಳೆ ಹೋಪನನೆ ಊಟಕ್ಕೆ?? " ಅಂದ.

-ಕಾವ್ಯಧಾರೆ

Sunday, 18 November 2012

ಗೆಜ್ಜೆ

ಗೆಳೆಯಾ....
ನೀ ಕೊಟ್ಟ ಗೆಜ್ಜೆಯು, ಬಿಡದೆನ್ನ ಕಾಡುತಿದೆ...
ಜೊತೆಗೆ ಸುತ್ತಾಡಿ, ನಕ್ಕು, ಅತ್ತು, ಹದವಾದ ಒಲವನ್ನು ತೋರುತಿದೆ...
ನನ್ನ ಹೆಸರಿನ ಮುಂದೆ ಗೀಚುತಿರುವೆ ನಿನ್ಹೆಸರ....
ನೆನೆದು ನಿನ್ನ ಕಣ್ಣಿನ ಸನ್ನೆ, ಕೆನ್ನೆ ಕೆಂಪಾಗುತಿದೆ....!!!


--ಕಾವ್ಯಧಾರೆ

Thursday, 15 November 2012

ಮನದ ದುಗುಡ...!!!ಅಂದು.....

ಯಾಕೋ ಎನನ್ನೂ ಓದುವ ಮನಸ್ಸಿರಲಿಲ್ಲ. ನಾನು ಹಾಗೆಲ್ಲಾ ಓದುವುದನ್ನು ತಪ್ಪಿಸುವ ಹುಡುಗಿಯಲ್ಲ. ಅಂದಿನದ್ದು ಅಂದೇ ಅಭ್ಯಾಸ ಮಾಡಿ ಮುಗಿಸುವಂತ ವಿಧೇಯ ವಿದ್ಯಾರ್ಥಿನಿ. ಆದರೆ ಆ ದಿನ ಸ್ನೇಹಿತೆಯೊಬ್ಬಳು ಹೇಳಿದ ವಿಷಯ ಮನಸ್ಸನ್ನು ಕಾಡುತಿತ್ತು. ಅವಳು ಹೇಳಿದ್ದು ಇಷ್ಟೆ : "ಅಪ್ಪ ಅಮ್ಮನ ಒಬ್ಬಳೇ ಮಗಳು ಹೇಳ್ತೆ, ನೀ ಮದ್ವೆ ಹೇಳಿ ಆಗಿ ಹೊದ್ಮೇಲೆ ಅಪ್ಪ ಅಮ್ಮನ ಸಂತಿಗೆ ಯಾರಿರ್ತ? ಒಂದೇ ಮಗಳಿದ್ರೆ ಇಷ್ಟೆ ಹಣೆಬರಹ"

ಇಡೀ ದಿನ ಆ ಬಗ್ಗೆ ಯೊಚಿಸುತ್ತಿದ್ದೆ. ಗಂಡು ಮಕ್ಕಳಿಲ್ಲದಿದ್ದರೆ ಅಪ್ಪ ಅಮ್ಮನಿಗೆ ಯಾರೂ ವೄದ್ದಾಪ್ಯದಲ್ಲಿ ದಿಕ್ಕಿರುವುದಿಲ್ಲವೇ? ನನ್ನನ್ನು ಯಾವುದೇ ತೊಡಕಿಗೆ ಎಡೆ ಮಾಡದೆ, ಇಲ್ಲಿಯತನಕ  ಕಾಪಾಡಿಕೊಂಡು ಬಂದ ನನ್ನ ಅಪ್ಪ ಅಮ್ಮನನ್ನು ಬಿಟ್ಟು ನಾನು ಇರಬೇಕೇ? 

ಮನೆಗೆ ಬಂದು ಅಮ್ಮನ ಕಾಲಮೇಲೆ ಮಲಗಿಕೊಂಡು ನನ್ನ ಪ್ರಶ್ನೆಯ ಸುರಿಮಳೆಗೈಯ್ಯತೊಡಗಿದೆ. 
"ಅಮ್ಮ ನಾ ಯಾಕೆ ಒಬ್ಬಳೇ ಮಗಳು?? ನನಗ್ಯಾಕೆ ತಮ್ಮನೋ ಅಣ್ಣನೋ ಇಲ್ಲ? ನಾನು ಮುಂದಿನ ವರ್ಷ ಇಂಜಿನೀಯರಿಂಗ್ ಹೋದಮೇಲೆ ನನ್ನ ಬಿಟ್ಟು ನಿಮಗೆ ಇರಲು ಸಾಧ್ಯವೇ? ಮಗನಿದ್ದರೆ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನಲ್ಲವೇ" ಅಮ್ಮ ಸುಮ್ಮನಿದ್ದಳು. ಆ ಕೂಡಲೆ ಏನನ್ನೂ ಹೇಳಲಿಲ್ಲ. ನಾನೂ ಮುಖವುಬ್ಬಿಸಿಕೊಂಡು ಕುಳಿತೆ.

ಸ್ವಲ್ಪ ಹೊತ್ತಿನ ನಂತರ ಅಮ್ಮ ನನ್ನ ಚಿಕ್ಕವಳಿದ್ದಾಗಿನ ಅಂಗಿಯನ್ನು ತಂದಳು. ನನಗೆ ಏನೂ ಅರ್ಥವಾಗದೆ ಸುಮ್ಮನೆ ಕುಳಿತಿದ್ದೆ. ನಂತರ ನನ್ನ ತಲೆಯನ್ನು ಅಕೆಯ ಕಾಲ್ಮೇಲೆ ಇರಿಸಿಕೊಂಡು ಸವರಿದಳು. ನಾನು ಮೊದಲೇ ಶಾಲೆಯಲ್ಲಿ "ಅಳುಬುರಕಿ" ಎಂದು ಕುಪ್ರಸಿದ್ದಿ ಹೊಂದಿದ ಹುಡುಗಿ. ಅಮ್ಮ ಇಷ್ಟು ಭಾವುಕಳಾದ ಮೇಲೆ ನನಗೂ ತಡೆಯಲಾಗಲಿಲ್ಲ. ಅಳಲು ಪ್ರಾರಂಭಿಸಿದೆ. ಅಮ್ಮ ನನ್ನನ್ನು ಪುಟ್ಟ ಮಗುವಂತೆ ಸಲಹುತ್ತ ಹೇಳಿದಳು. 
"ತಂಗೀ(ಅಮ್ಮ ನನ್ನನ್ನು ಹಾಗೇ ಕರೆಯುತ್ತಾಳೆ), ನೀನು ಹುಟ್ಟುವಾಗ, ನಮ್ಮದು ಕೆಳ ಮಧ್ಯಮ ವರ್ಗ. ಒಂದೇ ಮಗು ಸಾಕು, ಅದನ್ನೇ ಯಾವ ಕಮ್ಮಿಯೂ ಇಲ್ಲದೇ ಬೆಳೆಸಬೇಕೆಂಬುದೆ ನನ್ನ ಆಸೆಯಾಗಿತ್ತು. ಅದಕ್ಕೆ ನಿನಗೆ ತಮ್ಮ, ಅಣ್ಣ ಯಾರೂ ಇಲ್ಲ. ಮಗಳೂ, ಮಗ ಎಲ್ಲಾ ನನಗೆ ಒಂದೇ... ನಿನ್ನನ್ನ ನನ್ನ ಮಗಳಂತೆಯೂ, ಮಗನಂತೆಯೂ ಬೆಳೆಸಿದ್ದು. "

ಅಮ್ಮನ ಮಾತು ನನ್ನ ಕಣ್ಣಲ್ಲಿ ಜಲಧಾರೆಯನ್ನೇ ಹರಿಸಿತ್ತು. 


ಇಂದು....

ನನ್ನ ಕಾಲ್ಮೇಲೆ ನಾನು ನಿಂತಿದ್ದೇನೆ. ಅಪ್ಪ, ಅಮ್ಮನಿಂದ ಹಲವಾರು ನೂರು ಕಿಲೋಮೀಟರ್ಗಳಷ್ಟು ದೂರದಲ್ಲಿದ್ದೇನೆ. ದಿನವೂ ದೂರವಾಣಿಯಲ್ಲಿ ಮಾತುಕಥೆ ನಡಿಯುತ್ತದೆ. ನನ್ನ ಹಲವು ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುತ್ತೇನೆ. ಆದರೆ ನನ್ನ ಕೆಲವು ನಿರ್ಧಾರಗಳು ನನಗೆ ಖುಶಿ ಕೊಟ್ಟರೂ, ನನ್ನಪ್ಪ, ಅಮ್ಮನಿಗೆ ಖುಶಿ ಕೊಡುವ ನಿರ್ಧಾರಗಳಲ್ಲ. ಹಾಗೇ ಅವುಗಳನ್ನ ಬದಲಿಸಲೂ ಅಗುವುದಿಲ್ಲ. ನನ್ನ ಆನಂದಕ್ಕಾಗಿ ತಮ್ಮ ಬಗೆಗೆ ವಿಚಾರ ಮಾಡದ ಅವರಿಗಾಗಿ ನನ್ನ ಆಸೆಗಳನ್ನು ಬಲಿಗೊಡಲೇ?? ಅಥವಾ ಅವರ ಖುಷಿಯನ್ನೇ ನನ್ನದೆಂದು ತಿಳೆಯಲೇ ಎಂಬ ಹಪತಪಿಯಲ್ಲಿರುವ,

-ಕಾವ್ಯಧಾರೆ 

ಈ ಸಂಜೆ ಯಾಕಾಗಿದೆ ನೀನಿಲ್ಲದೆ....!!!!ಕಳೆದು ಹೋಗಲಿಂದು ನಾ ಅಂದಿನ ಸಂಜೆಯಲಿ,
ಮನದಲ್ಲಿ ಮೂಡುತಿದೆ ಮಧುರ ಭಾವನೆ...
ನಿನ್ನ ಒಲವಿನ ಪರಿ, ನಿನ್ನ ನಗುವಿನ ತರ,
ಮೋಡಿ ಮಾಡುತಿದೆ ನನ್ನ, ಮತ್ತೊಮ್ಮೆ ಭರನೆ...!!!

ಅಂದಿನ ಸಂಜೆಯ ಆ ಸಿಹಿ ಮಾತುಗಳು,
ತಂದಿವೆ ನನ್ನಲಿ ಮಂದಹಾಸದ ಉಲ್ಲಾಸ....
ನಿನ್ನ ಕಣ್ಣಿನ ಮಿಂಚು, ನಿನ್ನ ಮಾತಿನ ಝರಿ,
ಮರೆಸಿವೆ ನನ್ನೆದೆಯೊಳಗಿನ ಇರುಸುಮರುಸ....!!!

ದೂರದಲಿ ಇದ್ದರೂ ಈ ನನ್ನ ತನುವು,
ನಿನ್ನೆದೆಯಲಿ ಮುದ್ದಾದ ಗೂಡ ಕಟ್ಟುತಿದೆ....
ಸುತ್ತಲು ಹಲವರಿದ್ದರೂ, ನಾನಿಲ್ಲಿ ಒಬ್ಬಂಟಿ,
ಹಲವರಿಯುತಿದೆ ಇಂದು, ಈ ಸಂಜೆ ಯಾಕಾಗಿದೆ ನೀನಿಲ್ಲದೆ....!!!!

-ಕಾವ್ಯಧಾರೆ