Thursday, 15 November 2012

ಕನಸ ಕಂಗಳ ಗೆಳೆಯಾ...!

ಅಂದು ನಿನ್ನ ಕನಸ್ಸು ತುಂಬಿದ ಕಂಗಳ ನೋಡುತ್ತಾ ಕುಳಿತ ನನಗನಿಸಿತು,
ನಿನ್ನಲ್ಲೇಕೆ ಇಂತಹ ಸೆಳೆತವೆಂದು....
ಆ ನಿನ್ನ ಹೊಳಪು ಕಣ್ಣೇ ಅಥವಾ ಆ ನಿನ್ನ ಮಿನುಗು ನಗುವೇ??
ಆ ನಿನ್ನ ಬೆಚ್ಚನೆಯ ಅಪ್ಪುಗೆಯೇ ಅಥವಾ ಆ ನಿನ್ನ ದನಿಯ ಹದವೇ ??
ನೀ ನನಗೆ ಉಣ ಬಡಿಸುತ್ತಿರುವ ಒಲುಮೆಯೇ ಅಥವಾ ನಿನ್ನ ನಗುಮುಗದ ಅಮಲೇ ??

ನಿನ್ನ ಬೆರಳುಗಳು ನನ್ನ  ಹೆಸರನು ನೋಡಿ ನನಗನಿಸಿತು,
ಸೆಳೆತವೇಕಾದರೇನು??     
ನಿನ್ನ ಸನಿಹವೇ ನನಗೆ ಸಾಕೆಂದು....

-ಕಾವ್ಯಧಾರೆ 

ಪೀಜಿ ಪುರಾಣ...!!!

ಮನೆಯಲ್ಲಿ ಆರಾಮಾಗಿ ತಿಂದುಂಡು ಇದ್ದ ನಾನು ಮೊದಲನೇ ಸಾರಿ ಅಪ್ಪ-ಅಮ್ಮನಿಂದ  ದೂರವಾಗಿ ಬೇರೆ ಊರಿಗೆ ಹೋಗಿದ್ದು    ಹುಟ್ಟಿ ಹದಿನೆಂಟು ವರ್ಷದ ನಂತರ. ನನ್ನ ಪುಣ್ಯಕ್ಕೆ ಹಾಸ್ಟೆಲ್ ಚೆನ್ನಾಗಿತ್ತು , ನಂತರ ನನ್ನ ಮೊದಲನೇ ನೌಕರಿಯ ಸಮಯಕ್ಕೆ ಇದ್ದ ಮನೆಯಂತು ಸ್ವರ್ಗದ ಪ್ರತಿರೂಪ. ಎಲ್ಲ ವ್ಯವಸ್ಥೆಗಳನ್ನು ಹೊಂದಿದ್ದ ವಿಶಾಲವಾದ, ಗಾಳಿ ಬೆಳಕಿದ್ದ ಮನೆ. ನೋಡಲು ಟೀವಿ , ಬಳಸಲು ಅಂತರ್ಜಾಲ , ಇನ್ವರ್ಟರ್ ( ಕನ್ನಡದಲ್ಲಿ ಅರ್ಥ?? ಉಹ್ಮು ಗೊತ್ತಿಲ್ಲಾ..!!)  ಹಾಗೇ  ಏನೇನೋ ವ್ಯವಸ್ಥೆಗಳು.
ತಮ್ಮ ಮಕ್ಕಳಂತೆ ನಮ್ಮನ್ನು ಪ್ರೀತಿಸುತ್ತಿದ್ದ ಓನರ್ ಆಂಟಿ  ಹಾಗೂ ಅಂಕಲ್.  ಇಂತಿಪ್ಪ ಸ್ವರ್ಗದಲ್ಲಿ ತೇಲುತ್ತಿದ್ದ ನಾನು ಧೊಪ್ಪನೆ ಕೆಳಗೆ ಬಿದ್ದಿದ್ದು ನನ್ನ ನೌಕರಿ ಬದಲಾಯಿಸಿ ಬೆಂಗಳೂರಿಗೆ ಬಂದಾಗ.

ನನ್ನ ಲಗ್ಗೆಜ್ಗಳನ್ನು ಹೊತ್ತು ತಂದ ರಾಣಿ ಚೆನ್ನಮ್ಮ ರೈಲು ನನ್ನ ಅಪ್ಪ-ಅಮ್ಮನೊಂದಿಗೆ ನನ್ನನ್ನು ಇಳಿಸಿ ತನ್ನ ಪಾಡಿಗೆ ತನು ಹೋಯಿತು ಅಲ್ಲಿಂದ ಚಿಕ್ಕಪ್ಪನ  ಸೇರಿತು ನಮ್ಮ ಪಯಣ. ಆಲ್ಲಿಂದ ನನ್ನ ಆಫಿಸ್ ಒಂದೂವರೆ ತಾಸಿನ ಹಾದಿ. ಈ  ಬೆಂಗಳೂರಿನ  ಟ್ರಾಫಿಕ್ಕಿನಲ್ಲಿ ದಿನ ಅಷ್ಟೊತ್ತು ಅಲೆದಾಡುವುದೆಂದರೆ ಅದೊಂದು ಯುದ್ದವೇ ಸೈ. ಸರಿ...ನನ್ನ ಪೀಜಿ ಹಂಟಿಂಗ್ ಅಂದೇ ಶುರುವಾಯಿತು.

ಮೊದಲೇ ಸುಲೇಖಾ, ಕ್ವಿಕ್- ಆರ್ ಅದು ಇದು ಹತ್ತು ಹಲವಾರು ಸೈಟ್ಗಳಿಂದ ಪುಟಗಳಷ್ಟು ವಿಳಾಸ ಹಾಗು ದೂರವಾಣಿ ಸಂಖ್ಯೆಗಳನ್ನು ಬರೆದುಕೊಂಡಿದ್ದೆ. ( ಯಾವ ಪರೀಕ್ಷೆಗೂ ಇಷ್ಟು ಪೂರ್ವ ತಯಾರಿ ಮಾಡಿರಲ್ಲಿಲ್ಲವೇನೋ..). ಯಾರಿಗೆ ಕರೆ ಮಾಡಿದರೂ "ಬನ್ನಿ  ಮೇಡಂ.... ನೋಡ್ಕೊಂಡು ಹೋಗಿ" ಅನ್ನೋ ಉತ್ತರ. ನಾನೋ?? ಹೊಸ ಪೀಜಿಯಾ ಕನಸು ಕಾಣುತ್ತ ಹೊರಟೆ .  "ಪ್ರಥಮ ಪ್ರೇಮಂ ದಂತ ಭಗ್ನಂ " ಎನ್ನೋ ಹಾಗೆ, ನಾನು ನೋಡಿದ ಮೊದಲ  ಪೀಜಿ ರೈಲಿನ ಬೋಗಿಯ ಹಾಗಿತ್ತು.
ಮೂರಡಿ ಆರಡಿ  ಜಾಗ. ಕಟ್ಟಲು ಕೋಣೆ. ಗಾಳಿ ಬೆಳಕೂ ಬರಲಾರದಷ್ಟು ಸೆಕ್ಯುರಿಟಿ. ಅದಕ್ಕೆ ಆರು ಸಾವಿರ ಬಾಡಿಗೆ. ಓನರ್ ಗೆ ಕಿರಿಕಿರಿ ಮಾಡೋಣ ಅನ್ನೋ ಉದ್ದೇಶದಿಂದ "ಇಷ್ಟೇನಾ ರೂಮೂ" ಅಂತ ಕೇಳಿದ್ರೆ "ಬೇಕಾದರೆ  ಇರಿ, ಇಲ್ಲಾ ಅಂದರೆ ಹೋಗಿ"
 ಅಂತ ನನ್ನ ತಲೆಯನ್ನೇ ಬಿಸಿ ಮಾಡಿದಳು ಆಕೆ. ಎರಡನೇ ಪಿಜಿಯದು ಇನ್ನೊಂದು ಕರ್ಮಕಾಂಡ. ಅಡುಗೆ ಮನೆಯನ್ನೇ ರೂಂ ಮಾಡಿದ್ದಾರೆ ಅವರು. ಅಲ್ಲಿನ ಕಟ್ಟೆಗಳೇ ಕಪಾಟುಗಳು. ಹತ್ತು ಜನರಿಗೆ ಸೇರಿ ಒಂದೇ ಶೌಚಾಲಯ. ಮನೆಯಲ್ಲೇ ಇದ್ದ ಮುವರೊಡನೆ   "ನಿನ್ನಿಂದ ನಂಗ್ ತಡ ಆತು" ಅಂತ  ಕಿತ್ತಾಡಿ ಹೋಗುವ ನನ್ನಂಥವಳಿಗೆ ಇದೆಲ್ಲಾ ಸರಿ ಹೋಗುವುದಿಲ್ಲಾ ಅಂತ  ಬಿಟ್ಟು ಬಂದೆ. ಮೂರನೇಯ  ಪೀಜಿಯಲ್ಲಿ ಒಳ ಹೋಗುವ ಮೊದಲೇ ತಮಿಳು ತಲೆಗಳದ್ದೆ ದರ್ಶನ ಹಾಗೂ ನನ್ನ ಓಟ.

ಪರದೆಗಳನ್ನು ಹಾಕಿ ಕೋಣೆಗಳನ್ನು ಮಾಡಿದ್ದ ಪಿಜಿ, 'Solitary Confinement' ಪೀಜಿ, ತ್ರಿಕೋನಾಕಾರದ ಕೋಣೆಯ ಪೀಜಿ, ದನದ ಕೊಟ್ಟಿಗೆಯಂತಿರುವ ಪೀಜಿ (ನಮ್ಮಲಿನ ದನದ ಕೊಟ್ಟಿಗೆಯೇ ಬೇಕಷ್ಟು ಚೆನ್ನಾಗಿರುತ್ತದೆ..!!!) , ದಿನದಲ್ಲೂ ಕಗ್ಗತ್ತಲಿರುವ ಪೀಜಿ, ತಿಪ್ಪೇಗುಂಡಿಯಂತಿರುವ ಹೊಲಸು ಪೀಜಿ, ಹೀಗೆ ಮೂವತ್ತಕ್ಕೂ ಹೆಚ್ಚು ಪೀಜಿಗಳನ್ನ ನೋಡಿ, ಕೊನೆಗೆ ಇದ್ದಿದ್ದರಲ್ಲೇ ಆಗಬಹುದು ಎನ್ನುವಂತಾ ಒಂದು ಪೀಜಿಯಲ್ಲಿ  ಠಿಕಾಣಿ  ಹೂಡಿದ್ದೇನೆ. ಇಲ್ಲಿ ಎಷ್ಟು ದಿನದ ನಂಟೋ ಪರಮಾತ್ಮನೇ ಬಲ್ಲ. 

ಎಷ್ಟೋ ಸಲ  "ಯಾಕಪ್ಪಾ ದೇವ್ರೇ ಇದೆಲ್ಲ ನನಗೆ ಇದೆಲ್ಲಾ  ಬೇಕಿತ್ತು? ಅಲ್ಲೇ ಅಪ್ಪ ಅಮ್ಮನೊಂದಿಗೆ ಮನೆಯಲ್ಲೇ ಇರಬಹುದಿತ್ತಲ್ಲವೇ..." ಅನ್ನಿಸುತ್ತದೆ . ಆದರೆ ಇಲ್ಲಿಯ ಗಳಿಕೆ, ಸುತ್ತಲಿನ ಬಣ್ಣ ಬಣ್ಣದ ಜಗತ್ತು , ಐಶಾರಾಮಿ ಜೀವನದ ರುಚಿ ಎಲ್ಲೂ ಹೋಗದಂತೆ ತಡೆಯುತ್ತದೆ .

ಯಾರೋ ಸರಿಯಾಗೆ ಹೇಳಿದ್ದಾರೆ... 
"ಇರುವುದೆಲ್ಲವ ಬಿಟ್ಟು, ಇರುವೆ ಬಿಟ್ಟುಕೊಳ್ಳುವುದೇ ಜೀವನಾ"     
         
 - ಕಾವ್ಯಧಾರೆ 

Wednesday, 14 November 2012

ಓ ನನ್ನ ಗೆಳೆಯ...




ಹೀಗ್ಯಾಕೆ ಬೆಂಬಿಡದೆ ಕಾಡುತ್ತಿರುವೆ ಓ ನನ್ನ ಗೆಳೆಯ...
ನನಗೂ ನಿನ್ನೊಡನೆ  ಮಾತಾಡುವ ಮನವಿದೆ, ಆಲಂಗಿಸುವ ಭರವಿದೆ..
ನಿನ್ನ ನಗುವ ನನ್ನ ತುಟಿಯಲ್ಲಿ ಬೀರುತ್ತ, ನಿನ್ನೊಲವು ಆಗುವ ಚಟವಿದೆ....
ನಿನ್ನ ಬೆರಳುಗಳೊಡನೆ ಆಡುವ ಮನವಿದೆ...
ನಿನ್ನ ಕಣ್ಣಲ್ಲಿ ನನ್ನನ್ನೇ ಕಾಣುತ್ತ ನಿನ್ನುಸಿರಾಗುವ ಹಠವಿದೆ  

ಸುತ್ತಲಿರುವ ಬಂಧವನ್ನು ಬೇಧಿಸಿ ನಿನ್ನ ಒಡಲಲ್ಲಿ ಮೈಮರೆಯುವೆ ....
ಹೀಗ್ಯಾಕೆ ಬೆಂಬಿಡದೆ ಕಾಡುತ್ತಿರುವೆ ಓ ನನ್ನ ಗೆಳೆಯ...
ಬಿಡದೆ ಫೋನಾಯಿಸಿತ್ತಿರುವೆ, ತೆಗೆದುಕೊಳ್ಳಬಾರದೇ  ನನ್ನ ಕರೆಯ..!

-
ಕಾವ್ಯಧಾರೆ


ನನ್ನ ಡೈರಿಯ ತೆರೆಯುತ್ತಾ...!

ನಾನೊಬ್ಬ ಭಾವುಕ ಜೀವಿ. ಕೆಲವೊಮ್ಮೆ ಏನನ್ನೋ ಯೋಚಿಸುತ್ತ ನಗುತ್ತೇನೆ, ಕೆಲವೊಮ್ಮೆ ಚಿಕ್ಕ ಪುಟ್ಟ ವಿಷಯಗಳಿಗೂ ಕಂಬನಿ ಮಿಡಿಯುತ್ತೇನೆ. ಸುತ್ತಲು ಹತ್ತು ಹಲವರಿದ್ದಾರೆ, ಆದರೆ ಮನಸಿನ ಭಾವವನ್ನು ಅರ್ಥೈಸಿಕೊಳ್ಳಲು ಇರುವುದು ಎಷ್ಟು ಬರೆದರೂ ಮುಗಿಯದಂತ ನನ್ನ ಡೈರಿ ಮಾತ್ರ.

ನನ್ನ ನಗು, ಅಳು, ವಿಚಾರ, ಆಚಾರ ಎಲ್ಲವನ್ನು ಪೆನ್ನಿಸುತ್ತೇನೆ.
ಈ ಬ್ಲಾಗೆಂಬ ಮನೆಯಲ್ಲಿ ಈಗ ತಾನೆ ಕಣ್ಣು  ತೆರೆಯುತ್ತಿರುವ  ಈ ಮಗುವನ್ನು ತಿದ್ದಿ ಸಲಹಿ ಬೆಳೆಸಿರಿ.

ಧನ್ಯವಾದ,

ಕಾವ್ಯಧಾರೆ