Friday 22 February 2013

ಸುರಪಾನ...!


ಶಿರಸಿಯಲ್ಲೊಂದು ಬಾಡಿಗೆ ಮನೆ. ಮನೆಯ ಯಜಮಾನ ಎಂ.ಫಿಲ್. ನಲ್ಲಿ ಬಂಗಾರದ ಪದಕ ಪಡೆದಂತ ಬುದ್ದಿವಂತ. ಎಲ್ಲ ಬುದ್ದಿವಂತರಂತೆ ಆತನಿಗೂ ತನ್ನ ಸ್ವಂತ ಉದ್ದಿಮೆಯನ್ನು ಮಾಡುವ ಕನಸು. ಅದನ್ನು ನನಸು ಮಾಡುವ ನಿಟ್ಟಿನಲ್ಲೇ ಪ್ರಾರಂಭಿಸಿದ ಲೈಬ್ರರಿ. ಊರಿನ ಮಕ್ಕಳು, ಯುವಕ ಯುವತಿಯರು, ಹೆಂಗಳೆಯರ ಹಾಗೂ ಬುದ್ದಿ ಜೀವಿಗಳ ನೆಚ್ಚಿನ  ತಾಣ ಈತನ ಕನಸಿನ ಕೂಸು. ಇನ್ನು ಮನೆಯ ಒಡತಿ ಸಹ ಎಲ್ಲ ಮನೆ ಮರಿಗೆಯ ಕೆಲಸಗಳನ್ನು ಪಟ್ಟಾಗಿ ಮಾಡಿ, ಸಂಗೀತ ಅಭ್ಯಾಸವನ್ನು ಮಾಡಿ, ಗಂಡನ ಬರುವನ್ನು ಕಾಯುವಂತಹ ಸದ್ಗೃಹಿಣಿ. ಅವರಿಗೊಂದು ಎರಡು ಮಳೆಗಾಲವನ್ನು ನೋಡಿದ ಪುಟ್ಟ ಮಗು. ನಮ್ಮ ಮಗ ಬೆಳೆದು ಹೆಸರು ತರಬೇಕು, ಎಲ್ಲರಗಿಂತ ಮುಂದಿರಬೇಕು ಅಂತೆಲ್ಲ ಕನಸು ಕಟ್ಟತಾ ಇದ್ದ ಈ ಕುಟುಂಬ ಸ್ವರ್ಗಕ್ಕೇ ಕಿಚ್ಚು ಹಚ್ಚೋ ತರಹ ಇತ್ತು.




ಅಂದು ಮನೆಗೆ ಬಂದ ಯಜಮಾನ ಹೆಂಡತಿಗೆ  ಹೇಳ್ತಾ ಇದ್ದಾ. "ಇತ್ತೀಚಿಗೆ ಯಾಕೋ ನನ್ನ ಸಂಪಾದನೆ ಕಮ್ಮಿ ಆಗ್ತಿದೆ, ಕುಟುಂಬ ನಡೆಸೋಕೆ ಸಾಕಗತ್ತೋ ಇಲ್ವೋ , ನೀನು ಕೆಲಸಕ್ಕೆ ಸೇರ್ಕೋ ". ಈಕೆಗೆ ಚೆನ್ನಾಗಿ ಗೊತ್ತಿದ್ದ ವಿದ್ಯೆ ಸಂಗೀತ, ಸರಿ ಅದನ್ನೇ ಕಲಿಸೋಣ ಅಂತ ಅಲ್ಲೇ ಹತ್ತಿರದ ಒಂದು ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಸೇರಿಕೊಂಡಳು. ಹೀಗೆ ಸಾಗುತ್ತಿತ್ತು ಅವರ ಜೀವನದ ಬಂಡಿ.

ಹಾಗೆ ಮೂರು ನಾಕು ಮಳೆಗಾಲದ ನಂತರ, ಕೆಲಸ ಮುಗಿಸಿ ಮನೆಗೆ ಬಂದ ಈಕೆಗೆ ಮರುದಿನ ಹೋಗುತ್ತಿದ್ದ ಮದುವೆಗೆ ತವರು ಮನೆಯಲ್ಲಿ ಕೊಟ್ಟ ಬಂಗಾರದ ಸರ ಹಾಕಿಕೊಂಡು ಹೋಗುವ ಮನಸ್ಸಾಯಿತು. ಕಪಾಟು ತೆಗೆದು ನೋಡಿದರೆ ಸರದ ಸುಳಿವಿಲ್ಲ. ಗಂಡನನ್ನು ಕೇಳಿದಳು. ವಾರದ ಹಿಂದೆ ಮನೆಗೆ ಬಂದ ನಾದಿನಿಯನ್ನು ವಿಚಾರಿಸಿದಳು. ಎಲ್ಲರದು ಗೊತ್ತಿಲ್ಲವೆಂಬ ಉತ್ತರವೇ. ಬಾಲವಾಡಿಯಿಂದ ಬಂದ ಮಗನನ್ನು ’ಎಲ್ಲಾದರು ಆಟವಾಡಿ ಕಳೆದೆಯಾ?’ ಎಂದು ಕೇಳಿದಳು. ಪಾಪ..!! ಆ ಮುದ್ದು ಮಗು ಇಲ್ಲವೆಂಬಂತೆ ತಲೆ ಆಡಿಸಿತು. ಇಡಿ ಮನೆಯನ್ನೆಲ್ಲಾ ರೊಚ್ಚಿಗೆದ್ದು ಹುಡುಕಿದಳು. ಎಲ್ಲೂ ಸಿಗಲಿಲ್ಲ. ಕೊನೆಗೆ ತನ್ನ ಮರೆವನ್ನು ಶಪಿಸುತ್ತಾ ಮನಸಲ್ಲೆ ಕೊರಗಿದಳು.

ದಿನಕಳೆದಂತೆ ಮನೆಯಿಂದ ದುಡ್ಡು ಕಳವಾಗುತ್ತಿತ್ತು. ಅಂತೆಯೆ ಗಂಡನ ದುಡಿಮೆಯೂ ಇಳಿದಂತೆ ತೋರುತ್ತಿತ್ತು. ಹಾಗೋ ಹೀಗೋ ಇದ್ದಿದುರಲ್ಲೇ ಹೊಂದಿಸುತ್ತಾ ಸಂಸಾರ ತೂಗಿಸುತ್ತಿದ್ದಳು ಆಕೆ. ಗಂಡ-ಮಗನಿಗೆ  ಕಷ್ಟದ ಬಿಸಿ ತಟ್ಟದಂತೆ ತೂಗಿಸುವ ಜಾಣ್ಮೆ ಅವಳಲ್ಲಿತ್ತು.

ಹಾಗೆ ಒಂದು ದಿನ ಮನೆಗೆ ಬಂದಾಗ ಬಟ್ಟೆ ಒಣಗಿಸುವ ಹಗ್ಗ ನಾಪತ್ತೆಯಾಗಿತ್ತು. ಗಂಡನ ಚಪ್ಪಲ್ ಅಡ್ದಾದಿಡ್ಡಿಯಾಗಿ ಬಿದ್ದಿತ್ತು. ಮೊಬೈಲ್ ನೆಲದ ಮೇಲೆ ಮಲಗಿತ್ತು. ಮಗನ ಪಟ್ಟಿಯಲ್ಲಿನ ಹಾಳೆಯಲ್ಲಿ ಗಂಡ ಗೀಚಿದ ಪತ್ರವಿತ್ತು. ಆತ ಮನೆಯ ಎಲ್ಲ ಬಂಗಾರವನ್ನೂ ಒತ್ತೆಗಿಟ್ಟು ಶರಾಬೆಂಬ ನಕಲಿ ಅಮ್ರತದ ದಾಸನಾಗಿದ್ದ. ಹೆಂಡತಿ ಮಗನನ್ನು ಜೀವನ ಮುಗಿದರೂ ತೀರಿಸಲಾಗದಷ್ಟು ಸಾಲದ ಹೊರೆಯಲ್ಲಿಟ್ಟು ಹಗ್ಗಕ್ಕೆ ತಲೆಕೊಡಲು ದೂರ ದೂರಕ್ಕೆ ಸಾಗಿದ್ದ.



ತಮ್ಮ ಜವಾಬ್ದಾರಿಯನ್ನು ಅರಿಯದೇ ದುಶ್ಚಟಕ್ಕೆ ಬಲಿಯಾಗುವ ಎಲ್ಲ ಮೂರ್ಖರನ್ನು ಖಂಡಿಸುತ್ತಾ
-ಕಾವ್ಯಧಾರೆ

(ಚಿಕ್ಕಂದಿನಲ್ಲಿ ಮನಸ್ಸನ್ನು ಘಾಸಿಗೊಳಿಸಿದ ನಿಜ ಘಟನೆ ಆಧಾರಿತ)

2 comments:

  1. ಕಥೆ ನೇರ ದಿಟ್ಟ ನಿರಂತರ. ಓದಿಸಿಕೊಂಡು ಹೋಗುತ್ತೆ

    ReplyDelete
  2. ಇದು ಸುರಪಾನ ಆಗುವುದಿಲ್ಲ ಮಧ್ಯಪಾನವಾಗುತ್ತದೆ.
    ಸುರಪಾನ ದೇವತೆಗಳು ಕುಡಿಯುವರು.
    ಮಧ್ಯಪಾನ ಮಾನವರು ಕುಡಿಯುವರು

    ReplyDelete