Friday 22 February 2013

ನಾನು, ಪಕ್ಕದ್ಮನೆ ತಮ್ಮ ಮತ್ತು ನಾಯಿ ಮರಿ...!


ನನಗೆ ಮೊದಲಿನಿಂದನೂ ಯಾಕೋ ಮನುಷ್ಯರಕಿಂತ ಜಾಸ್ತಿ ಪ್ರಾಣಿಗಳ ಮೇಲೆ ಪ್ರೀತಿ. ಎಲ್ಲಿ ಬೆಕ್ಕು ನಾಯಿಗಳ ಮರಿ ಕಾಣಲಿ ಅವುಗಳನ್ನ ಮುದ್ದು ಮಾಡದೇ ಬರಲು ಸಾಧ್ಯವಿಲ್ಲ. ಹತ್ತು ಹನ್ನೆರಡು ವರ್ಷವಿದ್ದ ಸಮಯದಲ್ಲಿ ಪಕ್ಕದ ಮನೆ ಹುಡುಗನೊಡನೆ ಸೇರಿಕೊಂಡು ಕಂಡ ಕಂಡಲ್ಲಿಂದ ನಾಯಿ ಮರಿಗಳನ್ನು ಎತ್ತಿಕೊಂಡು ಬಂದು ಸಾಕಲು ಪ್ರಯತ್ನಿಸಿದ ನೆನಪುಗಳಿವೆ. ಆದರೆ ನನ್ನಮ್ಮನದು ಒಂದೇ ರಾಗ. "ನೀನು ಬೆಕ್ಕಿನ ಮರಿ, ನಾಯಿ ಮರಿಗಳನ್ನು ತಂದು ಸಾಕಿಕೊಂಡರೆ ಅದರ ಹೊಲಸು ಚೊಕ್ಕ ಮಾಡದು ಯಾರು? ನೀನೆ ಮಾಡ್ತೆ ಹೇಳಾರೆ ಸಾಕಲಡ್ಡಿಲ್ಲೆ" ಅಂತ. ಅದನ್ನೂ ಒಮ್ಮೆ ಮಾಡಿ ನೋಡಾಯ್ತು. ಬೆಳಿಗ್ಗೆ ೭ ಘಂಟೆಗೆ ಎದ್ದು ನಾಯಿಮರಿ ಹುಡುಕಲು ಪಕ್ಕದ್ಮನೆ ತಮ್ಮನ ಕರ್ಕೊಂಡು ಹೋಗಾಯ್ತು. (ಬೆಳಿಗ್ಗೆ ಹೊತ್ತಿನಲ್ಲಿ ನಾಯಿ ಮರಿಗಳು ವಾಕಿಂಗ್ ಬರುತ್ತವೆ. ಹುಡುಕಲು ಸಸಾರ ಅನ್ನೋ ಥಿಯರಿ ನಮ್ಮದು). ಅಂತು ತಾಯಿ ನಾಯಿಯ ಕಣ್ಣು ತಪ್ಪಿಸಿ, ಒಂದು ಬೆಳ್ಳನೆಯ ತೆಳ್ಳನೆಯ ನಾಯಿ ಮರಿಯನ್ನು ಹಿಡಿದುಕೊಂಡು ಬಂದು ಆಯ್ತು. ಅದಕ್ಕೆ ಜೋನಿ ಎಂಬ ನಾಮಕರಣವೂ ಆಯ್ತು. ಅದು ತನ್ನ ನಿತ್ಯಕರ್ಮಗಳನ್ನ ಹೊತ್ತು ಗೊತ್ತಿಲ್ಲದೆ ಮಾಡಿದಾಗ ನಾನು ಮತ್ತು ಪಕ್ಕದ್ಮನೆ ತಮ್ಮ ಒಬ್ಬರನ್ನೊಬ್ಬರ ಮುಖ ನೋಡುತ್ತ ಕುಳಿತುಕೊಳ್ಳುತ್ತಿದ್ದೆವು. ನಮ್ಮ ಹೆತ್ತ ತಪ್ಪಿಗೆ ಅಮ್ಮಂದಿರು ಕ್ಲೀನಿಂಗ್ ಕೆಲಸವನ್ನೂ ಮಾಡಬೇಕಾಯ್ತು.

ಜೋನಿ


ಜೋನಿ ಮೊದಲೇ ಚುರುಕು. ಒಬ್ಬರ ಚಪ್ಪಲ್ಲನ್ನು ಇದ್ದಲ್ಲಿ ಬಿಡುತ್ತಿರಲಿಲ್ಲ. ಅವುಗಳನ್ನು ಕಚ್ಚಿ ಕಚ್ಚಿ ತುಂಡು ಮಾಡುವವರೆಗೂ ಅದಕ್ಕೆ ಸಮಾಧಾನವು ಇರುತ್ತಿರಲಿಲ್ಲ. ನಮಗೋ ಅದರ ಚೂಪಾದ ಹಲ್ಲಿನ ಬಗ್ಗೆ ಒಳಗೊಳಗೆ ಹೆಮ್ಮೆ. ಸುತ್ತಮುತ್ತಲಿನವರು ಅದನ್ನ ಶಪಿಸಿದರೂ ಜೋನಿ ನಮ್ಮ ಕಣ್ಮ್ಣಣಿಯಾಗಿತ್ತು. (ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನೋ ಹಾಗೆ). ಹೀಗೆ ನಮ್ಮ ಮನ ಗೆದ್ದಿದ್ದ ಜೋನಿ ಒಂದು ದಿನ ಮುಂದಿನ ಮನೆಯ ಅಂಕಲ್ ಅವರ ಗಾಡಿ ಸೀಟ್ ಅನ್ನು  ರಾತ್ರಿ ಕಚ್ಚಿ ಕಚ್ಚಿ ಹರಿದು ಹಾಕಿತು. ಬೆಳಗ್ಗೆ ನೋಡೋತನಕ ಆ ಅಂಕಲ್ ಜೋನಿಯನ್ನ ಚೀಲದಲ್ಲಿ ತುಂಬಿಸಿಕೊಂಡು ಹೋಗಿ ದೂರದ ಕುಮಟಾ ರಸ್ತೆಯಲ್ಲಿ ಬಿಟ್ಟು ಬಂದಿದ್ದರು. ವಾಸನೆ ಮೂಸಿಕೊಂಡು ಬರಬಹುದೆಂಬ ನಿರೀಕ್ಷೆಯಲ್ಲಿ ೨-೩ ದಿನ ಕಾದೂ ನೋಡಿದೆವು. ಕೊನೆಗೂ ಬರದಿದ್ದಾಗ ಬೇರೆ ದಾರಿಯಿಲ್ಲದೆ ಮತ್ತೆ ಬೆಳಿಗ್ಗೆ ೭ ಘಂಟೆಗೆದ್ದು ನಾಯಿ ಮರಿ ಹುಡುಕಲು ಹೊರಟೆವು.

ಸೋನು


ಚಿನ್ನು, ಕಜ್ಜಿ ಮೈಯ್ಯ ಸೋನು, ರಾಜು, ಕರಿಯಾ ಹಾಗೆ ಹಲವು ಮರಿಗಳು ಬಂದು ಹೋದವು. ಆಮೇಲೆ ಬಂದ ಪಿಂಕಿ ಒಳ್ಳೆ ಗುಣದ ಪಿಂಕಿ ವರ್ಷದ ಕಾಲ ನಮ್ಮ ಜೊತೆಗಿತ್ತು. ಕೇಕ್ ಚೊಕ್ಲೇಟ್, ಹಣ್ಣು, ಐಸ್ ಕ್ರೀಮ್ ಹೀಗೆ ನಾವು ತಿನ್ನುತ್ತಿದ್ದ ಎಲ್ಲವನ್ನು ತಿನ್ನುತ್ತ ಆಡುತ್ತ ಇರುತ್ತಿದ್ದ ಪಿಂಕಿ ಅಕ್ಕ ಪಕ್ಕದ ಬೀದಿಯ ಹುಡುಗರೆದುರು ನಮ್ಮ ಗೌರವವನ್ನ ಹೆಚ್ಚಿಸಿತ್ತು. ಆದರೆ ಆ ದೇವರು ಆ ಖುಷಿಯನ್ನ ಹೆಚ್ಚು ದಿನ ಕೊಡಲಿಲ್ಲ. ಕೊನೆಗೆ ಒಂದು ದಿನ ಪಿಂಕಿ ನಮಗೆ ಅದರ ನೆನಪನ್ನಷ್ಟೆ ಉಳಿಸಿ ಕೊನೆ ಉಸಿರೆಳೆಯಿತು. ಅಂದು ಅತ್ತಿದ್ದಕ್ಕೇ ಲೆಕ್ಕವಿಲ್ಲ. ಪಿಂಕಿ ನಮ್ಮ ಮನಸ್ಸಲ್ಲಿ ತನ್ನ ಛಾಪು ಮೂಡಿಸಿ ಹೋಗಿತ್ತು.

ಪಿಂಕಿ


ಈ ಘಟನೆಯ ನಂತರ ಮತ್ತೆ ನಾಯಿ ಮರಿಯನ್ನ ಸಾಕುವ ಧೈರ್ಯ ಬರಲಿಲ್ಲ. ಇದೆಲ್ಲಾ ಆಗಿ ಈಗೊಂದು ೧೫ ವರ್ಷ ಆಯ್ತು. ನಾನು ಕಂಪ್ಯೂಟರ್ ಎದುರಲ್ಲಿ ಕೂತು ಕಿಟಿ ಕಿಟಿ ಮಡುತ್ತಿರುತ್ತೇನೆ.ನನ್ನ ನಾಯಿಮರಿ ಹುಡುಕುವ ಕೆಲಸದಲ್ಲಿ ಸಾಥ್ ನೀಡುತ್ತಿದ್ದ ತಮ್ಮ ಎಲ್ಲೋ ಬೇರೆಡೆ ತನ್ನ ಗುರಿಯೆಡೆ ಸಾಗುತ್ತಿದ್ದಾನೆ. ಈಗ ಮತ್ತೆ ನಾಯಿ ಮರಿ ಬೇಕು ಅನ್ನಿಸುತ್ತಿದೆ. ಆದರೆ ಬಾಲ್ಯದ ನೆನಪಲ್ಲಿ ಅಚ್ಚಳಿಯದೆ ಉಳಿದ ಜೋನಿ, ಚಿನ್ನು, ಸೋನು, ರಾಜು, ಕರಿಯಾ, ಪಿಂಕಿಗಳು ಮತ್ತೆ ಮತ್ತೆ ಕಾಡುತ್ತಿವೆ.

ಬಾಲ್ಯದ ಸವಿಯ ಸವಿಯುತ್ತಾ

-    ಕಾವ್ಯಧಾರೆ


3 comments:

  1. ಪ್ರಾಣಿಗಳ ಮೇಲಿನ ಮಮತೆಯ ಲೇಖನ ಸೊಗಸಾಗಿದೆ. ಅವುಗಳು ತೋರುವ ವಿಶ್ವಾಸ ಬಲು ಅಪ್ತತೆಯನ್ನು ಕೊಡುತ್ತದೆ

    ReplyDelete