Thursday, 15 November 2012

ಪೀಜಿ ಪುರಾಣ...!!!

ಮನೆಯಲ್ಲಿ ಆರಾಮಾಗಿ ತಿಂದುಂಡು ಇದ್ದ ನಾನು ಮೊದಲನೇ ಸಾರಿ ಅಪ್ಪ-ಅಮ್ಮನಿಂದ  ದೂರವಾಗಿ ಬೇರೆ ಊರಿಗೆ ಹೋಗಿದ್ದು    ಹುಟ್ಟಿ ಹದಿನೆಂಟು ವರ್ಷದ ನಂತರ. ನನ್ನ ಪುಣ್ಯಕ್ಕೆ ಹಾಸ್ಟೆಲ್ ಚೆನ್ನಾಗಿತ್ತು , ನಂತರ ನನ್ನ ಮೊದಲನೇ ನೌಕರಿಯ ಸಮಯಕ್ಕೆ ಇದ್ದ ಮನೆಯಂತು ಸ್ವರ್ಗದ ಪ್ರತಿರೂಪ. ಎಲ್ಲ ವ್ಯವಸ್ಥೆಗಳನ್ನು ಹೊಂದಿದ್ದ ವಿಶಾಲವಾದ, ಗಾಳಿ ಬೆಳಕಿದ್ದ ಮನೆ. ನೋಡಲು ಟೀವಿ , ಬಳಸಲು ಅಂತರ್ಜಾಲ , ಇನ್ವರ್ಟರ್ ( ಕನ್ನಡದಲ್ಲಿ ಅರ್ಥ?? ಉಹ್ಮು ಗೊತ್ತಿಲ್ಲಾ..!!)  ಹಾಗೇ  ಏನೇನೋ ವ್ಯವಸ್ಥೆಗಳು.
ತಮ್ಮ ಮಕ್ಕಳಂತೆ ನಮ್ಮನ್ನು ಪ್ರೀತಿಸುತ್ತಿದ್ದ ಓನರ್ ಆಂಟಿ  ಹಾಗೂ ಅಂಕಲ್.  ಇಂತಿಪ್ಪ ಸ್ವರ್ಗದಲ್ಲಿ ತೇಲುತ್ತಿದ್ದ ನಾನು ಧೊಪ್ಪನೆ ಕೆಳಗೆ ಬಿದ್ದಿದ್ದು ನನ್ನ ನೌಕರಿ ಬದಲಾಯಿಸಿ ಬೆಂಗಳೂರಿಗೆ ಬಂದಾಗ.

ನನ್ನ ಲಗ್ಗೆಜ್ಗಳನ್ನು ಹೊತ್ತು ತಂದ ರಾಣಿ ಚೆನ್ನಮ್ಮ ರೈಲು ನನ್ನ ಅಪ್ಪ-ಅಮ್ಮನೊಂದಿಗೆ ನನ್ನನ್ನು ಇಳಿಸಿ ತನ್ನ ಪಾಡಿಗೆ ತನು ಹೋಯಿತು ಅಲ್ಲಿಂದ ಚಿಕ್ಕಪ್ಪನ  ಸೇರಿತು ನಮ್ಮ ಪಯಣ. ಆಲ್ಲಿಂದ ನನ್ನ ಆಫಿಸ್ ಒಂದೂವರೆ ತಾಸಿನ ಹಾದಿ. ಈ  ಬೆಂಗಳೂರಿನ  ಟ್ರಾಫಿಕ್ಕಿನಲ್ಲಿ ದಿನ ಅಷ್ಟೊತ್ತು ಅಲೆದಾಡುವುದೆಂದರೆ ಅದೊಂದು ಯುದ್ದವೇ ಸೈ. ಸರಿ...ನನ್ನ ಪೀಜಿ ಹಂಟಿಂಗ್ ಅಂದೇ ಶುರುವಾಯಿತು.

ಮೊದಲೇ ಸುಲೇಖಾ, ಕ್ವಿಕ್- ಆರ್ ಅದು ಇದು ಹತ್ತು ಹಲವಾರು ಸೈಟ್ಗಳಿಂದ ಪುಟಗಳಷ್ಟು ವಿಳಾಸ ಹಾಗು ದೂರವಾಣಿ ಸಂಖ್ಯೆಗಳನ್ನು ಬರೆದುಕೊಂಡಿದ್ದೆ. ( ಯಾವ ಪರೀಕ್ಷೆಗೂ ಇಷ್ಟು ಪೂರ್ವ ತಯಾರಿ ಮಾಡಿರಲ್ಲಿಲ್ಲವೇನೋ..). ಯಾರಿಗೆ ಕರೆ ಮಾಡಿದರೂ "ಬನ್ನಿ  ಮೇಡಂ.... ನೋಡ್ಕೊಂಡು ಹೋಗಿ" ಅನ್ನೋ ಉತ್ತರ. ನಾನೋ?? ಹೊಸ ಪೀಜಿಯಾ ಕನಸು ಕಾಣುತ್ತ ಹೊರಟೆ .  "ಪ್ರಥಮ ಪ್ರೇಮಂ ದಂತ ಭಗ್ನಂ " ಎನ್ನೋ ಹಾಗೆ, ನಾನು ನೋಡಿದ ಮೊದಲ  ಪೀಜಿ ರೈಲಿನ ಬೋಗಿಯ ಹಾಗಿತ್ತು.
ಮೂರಡಿ ಆರಡಿ  ಜಾಗ. ಕಟ್ಟಲು ಕೋಣೆ. ಗಾಳಿ ಬೆಳಕೂ ಬರಲಾರದಷ್ಟು ಸೆಕ್ಯುರಿಟಿ. ಅದಕ್ಕೆ ಆರು ಸಾವಿರ ಬಾಡಿಗೆ. ಓನರ್ ಗೆ ಕಿರಿಕಿರಿ ಮಾಡೋಣ ಅನ್ನೋ ಉದ್ದೇಶದಿಂದ "ಇಷ್ಟೇನಾ ರೂಮೂ" ಅಂತ ಕೇಳಿದ್ರೆ "ಬೇಕಾದರೆ  ಇರಿ, ಇಲ್ಲಾ ಅಂದರೆ ಹೋಗಿ"
 ಅಂತ ನನ್ನ ತಲೆಯನ್ನೇ ಬಿಸಿ ಮಾಡಿದಳು ಆಕೆ. ಎರಡನೇ ಪಿಜಿಯದು ಇನ್ನೊಂದು ಕರ್ಮಕಾಂಡ. ಅಡುಗೆ ಮನೆಯನ್ನೇ ರೂಂ ಮಾಡಿದ್ದಾರೆ ಅವರು. ಅಲ್ಲಿನ ಕಟ್ಟೆಗಳೇ ಕಪಾಟುಗಳು. ಹತ್ತು ಜನರಿಗೆ ಸೇರಿ ಒಂದೇ ಶೌಚಾಲಯ. ಮನೆಯಲ್ಲೇ ಇದ್ದ ಮುವರೊಡನೆ   "ನಿನ್ನಿಂದ ನಂಗ್ ತಡ ಆತು" ಅಂತ  ಕಿತ್ತಾಡಿ ಹೋಗುವ ನನ್ನಂಥವಳಿಗೆ ಇದೆಲ್ಲಾ ಸರಿ ಹೋಗುವುದಿಲ್ಲಾ ಅಂತ  ಬಿಟ್ಟು ಬಂದೆ. ಮೂರನೇಯ  ಪೀಜಿಯಲ್ಲಿ ಒಳ ಹೋಗುವ ಮೊದಲೇ ತಮಿಳು ತಲೆಗಳದ್ದೆ ದರ್ಶನ ಹಾಗೂ ನನ್ನ ಓಟ.

ಪರದೆಗಳನ್ನು ಹಾಕಿ ಕೋಣೆಗಳನ್ನು ಮಾಡಿದ್ದ ಪಿಜಿ, 'Solitary Confinement' ಪೀಜಿ, ತ್ರಿಕೋನಾಕಾರದ ಕೋಣೆಯ ಪೀಜಿ, ದನದ ಕೊಟ್ಟಿಗೆಯಂತಿರುವ ಪೀಜಿ (ನಮ್ಮಲಿನ ದನದ ಕೊಟ್ಟಿಗೆಯೇ ಬೇಕಷ್ಟು ಚೆನ್ನಾಗಿರುತ್ತದೆ..!!!) , ದಿನದಲ್ಲೂ ಕಗ್ಗತ್ತಲಿರುವ ಪೀಜಿ, ತಿಪ್ಪೇಗುಂಡಿಯಂತಿರುವ ಹೊಲಸು ಪೀಜಿ, ಹೀಗೆ ಮೂವತ್ತಕ್ಕೂ ಹೆಚ್ಚು ಪೀಜಿಗಳನ್ನ ನೋಡಿ, ಕೊನೆಗೆ ಇದ್ದಿದ್ದರಲ್ಲೇ ಆಗಬಹುದು ಎನ್ನುವಂತಾ ಒಂದು ಪೀಜಿಯಲ್ಲಿ  ಠಿಕಾಣಿ  ಹೂಡಿದ್ದೇನೆ. ಇಲ್ಲಿ ಎಷ್ಟು ದಿನದ ನಂಟೋ ಪರಮಾತ್ಮನೇ ಬಲ್ಲ. 

ಎಷ್ಟೋ ಸಲ  "ಯಾಕಪ್ಪಾ ದೇವ್ರೇ ಇದೆಲ್ಲ ನನಗೆ ಇದೆಲ್ಲಾ  ಬೇಕಿತ್ತು? ಅಲ್ಲೇ ಅಪ್ಪ ಅಮ್ಮನೊಂದಿಗೆ ಮನೆಯಲ್ಲೇ ಇರಬಹುದಿತ್ತಲ್ಲವೇ..." ಅನ್ನಿಸುತ್ತದೆ . ಆದರೆ ಇಲ್ಲಿಯ ಗಳಿಕೆ, ಸುತ್ತಲಿನ ಬಣ್ಣ ಬಣ್ಣದ ಜಗತ್ತು , ಐಶಾರಾಮಿ ಜೀವನದ ರುಚಿ ಎಲ್ಲೂ ಹೋಗದಂತೆ ತಡೆಯುತ್ತದೆ .

ಯಾರೋ ಸರಿಯಾಗೆ ಹೇಳಿದ್ದಾರೆ... 
"ಇರುವುದೆಲ್ಲವ ಬಿಟ್ಟು, ಇರುವೆ ಬಿಟ್ಟುಕೊಳ್ಳುವುದೇ ಜೀವನಾ"     
         
 - ಕಾವ್ಯಧಾರೆ 

5 comments:

  1. ನನ್ನ ಪರಿಸ್ಥಿತಿ ನಿಮಗಿಂತ ಭಿನ್ನವೇನಲ್ಲ..
    ಪಿಜಿ ಪುರಾಣ ಸಕ್ಕತ್ತಾಗಿದ್ದು ...
    ನಂಗೂ ನನ್ನ ಪಿಜಿ ಪುರಾಣ ಬರೆಯೋ ಮನಸ್ಸಾಗಿದೆ ನಿಮ್ಮ ಲೇಖನ ನೋಡಿ... ಥಾಂಕ್ ಯು...

    ReplyDelete
    Replies
    1. ಬಹುಶಃ ಇದು ಎಲ್ಲಾ ಹುಡುಗಿಯರ ಕಥೆ...!

      Delete
  2. ಪಿ.ಜಿ. ಪುರಾಣ.ಸೊಗಸಾಗಿದೆ.ಪಜೀತಿಪಡುವ ಹುಡುಕಾಟ, ಭಾವನೆಗಳ.ತಾಕಲಾಟ .ಮನದಲ್ಲಿ ಭಾವದ ಗೂಡು ಕಟ್ಟಿಕೊಂಡು..ಅದಕ್ಕೆ ಸರಿಯಾದ ರೆಕ್ಕೆಗಳನ್ನು ಹುಡುಕುವುದು ಸಾಹಸವೇ ಸರಿ..ನಿಮ್ಮ ಲೇಖನದ ಪ್ರತಿಪದಗಳನ್ನೂ ಚೆನ್ನಾಗಿ ಆಯ್ದು ನೇಯ್ದಿರುವ ಪರಿ ಹಿತವಾಗುತ್ತದೆ. ಮುಂದುವರೆಸಿ ಬರಹದ ನಾಗಾಲೋಟ..:-)

    ReplyDelete
    Replies
    1. ಧನ್ಯವಾದಗಳು ಸರ್..! ನಿಮ್ಮ ಪ್ರೊತ್ಸಾಹ ಯಾವತ್ತು ಇರಲಿ..:)

      Delete
  3. ಹ್ಹ ಹ್ಹ... ಬಹುತೇಕ ಪಿಜಿಗಳು ಹೀಗೇ ಅಂತ ಕೇಳ್ಪಟ್ಟಿದ್ದೇನೆ ! ಮಜಾ ಮಾಡಿ. :)

    ReplyDelete