Thursday, 15 November 2012

ಮನದ ದುಗುಡ...!!!



ಅಂದು.....

ಯಾಕೋ ಎನನ್ನೂ ಓದುವ ಮನಸ್ಸಿರಲಿಲ್ಲ. ನಾನು ಹಾಗೆಲ್ಲಾ ಓದುವುದನ್ನು ತಪ್ಪಿಸುವ ಹುಡುಗಿಯಲ್ಲ. ಅಂದಿನದ್ದು ಅಂದೇ ಅಭ್ಯಾಸ ಮಾಡಿ ಮುಗಿಸುವಂತ ವಿಧೇಯ ವಿದ್ಯಾರ್ಥಿನಿ. ಆದರೆ ಆ ದಿನ ಸ್ನೇಹಿತೆಯೊಬ್ಬಳು ಹೇಳಿದ ವಿಷಯ ಮನಸ್ಸನ್ನು ಕಾಡುತಿತ್ತು. ಅವಳು ಹೇಳಿದ್ದು ಇಷ್ಟೆ : "ಅಪ್ಪ ಅಮ್ಮನ ಒಬ್ಬಳೇ ಮಗಳು ಹೇಳ್ತೆ, ನೀ ಮದ್ವೆ ಹೇಳಿ ಆಗಿ ಹೊದ್ಮೇಲೆ ಅಪ್ಪ ಅಮ್ಮನ ಸಂತಿಗೆ ಯಾರಿರ್ತ? ಒಂದೇ ಮಗಳಿದ್ರೆ ಇಷ್ಟೆ ಹಣೆಬರಹ"

ಇಡೀ ದಿನ ಆ ಬಗ್ಗೆ ಯೊಚಿಸುತ್ತಿದ್ದೆ. ಗಂಡು ಮಕ್ಕಳಿಲ್ಲದಿದ್ದರೆ ಅಪ್ಪ ಅಮ್ಮನಿಗೆ ಯಾರೂ ವೄದ್ದಾಪ್ಯದಲ್ಲಿ ದಿಕ್ಕಿರುವುದಿಲ್ಲವೇ? ನನ್ನನ್ನು ಯಾವುದೇ ತೊಡಕಿಗೆ ಎಡೆ ಮಾಡದೆ, ಇಲ್ಲಿಯತನಕ  ಕಾಪಾಡಿಕೊಂಡು ಬಂದ ನನ್ನ ಅಪ್ಪ ಅಮ್ಮನನ್ನು ಬಿಟ್ಟು ನಾನು ಇರಬೇಕೇ? 

ಮನೆಗೆ ಬಂದು ಅಮ್ಮನ ಕಾಲಮೇಲೆ ಮಲಗಿಕೊಂಡು ನನ್ನ ಪ್ರಶ್ನೆಯ ಸುರಿಮಳೆಗೈಯ್ಯತೊಡಗಿದೆ. 
"ಅಮ್ಮ ನಾ ಯಾಕೆ ಒಬ್ಬಳೇ ಮಗಳು?? ನನಗ್ಯಾಕೆ ತಮ್ಮನೋ ಅಣ್ಣನೋ ಇಲ್ಲ? ನಾನು ಮುಂದಿನ ವರ್ಷ ಇಂಜಿನೀಯರಿಂಗ್ ಹೋದಮೇಲೆ ನನ್ನ ಬಿಟ್ಟು ನಿಮಗೆ ಇರಲು ಸಾಧ್ಯವೇ? ಮಗನಿದ್ದರೆ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನಲ್ಲವೇ" ಅಮ್ಮ ಸುಮ್ಮನಿದ್ದಳು. ಆ ಕೂಡಲೆ ಏನನ್ನೂ ಹೇಳಲಿಲ್ಲ. ನಾನೂ ಮುಖವುಬ್ಬಿಸಿಕೊಂಡು ಕುಳಿತೆ.

ಸ್ವಲ್ಪ ಹೊತ್ತಿನ ನಂತರ ಅಮ್ಮ ನನ್ನ ಚಿಕ್ಕವಳಿದ್ದಾಗಿನ ಅಂಗಿಯನ್ನು ತಂದಳು. ನನಗೆ ಏನೂ ಅರ್ಥವಾಗದೆ ಸುಮ್ಮನೆ ಕುಳಿತಿದ್ದೆ. ನಂತರ ನನ್ನ ತಲೆಯನ್ನು ಅಕೆಯ ಕಾಲ್ಮೇಲೆ ಇರಿಸಿಕೊಂಡು ಸವರಿದಳು. ನಾನು ಮೊದಲೇ ಶಾಲೆಯಲ್ಲಿ "ಅಳುಬುರಕಿ" ಎಂದು ಕುಪ್ರಸಿದ್ದಿ ಹೊಂದಿದ ಹುಡುಗಿ. ಅಮ್ಮ ಇಷ್ಟು ಭಾವುಕಳಾದ ಮೇಲೆ ನನಗೂ ತಡೆಯಲಾಗಲಿಲ್ಲ. ಅಳಲು ಪ್ರಾರಂಭಿಸಿದೆ. ಅಮ್ಮ ನನ್ನನ್ನು ಪುಟ್ಟ ಮಗುವಂತೆ ಸಲಹುತ್ತ ಹೇಳಿದಳು. 
"ತಂಗೀ(ಅಮ್ಮ ನನ್ನನ್ನು ಹಾಗೇ ಕರೆಯುತ್ತಾಳೆ), ನೀನು ಹುಟ್ಟುವಾಗ, ನಮ್ಮದು ಕೆಳ ಮಧ್ಯಮ ವರ್ಗ. ಒಂದೇ ಮಗು ಸಾಕು, ಅದನ್ನೇ ಯಾವ ಕಮ್ಮಿಯೂ ಇಲ್ಲದೇ ಬೆಳೆಸಬೇಕೆಂಬುದೆ ನನ್ನ ಆಸೆಯಾಗಿತ್ತು. ಅದಕ್ಕೆ ನಿನಗೆ ತಮ್ಮ, ಅಣ್ಣ ಯಾರೂ ಇಲ್ಲ. ಮಗಳೂ, ಮಗ ಎಲ್ಲಾ ನನಗೆ ಒಂದೇ... ನಿನ್ನನ್ನ ನನ್ನ ಮಗಳಂತೆಯೂ, ಮಗನಂತೆಯೂ ಬೆಳೆಸಿದ್ದು. "

ಅಮ್ಮನ ಮಾತು ನನ್ನ ಕಣ್ಣಲ್ಲಿ ಜಲಧಾರೆಯನ್ನೇ ಹರಿಸಿತ್ತು. 


ಇಂದು....

ನನ್ನ ಕಾಲ್ಮೇಲೆ ನಾನು ನಿಂತಿದ್ದೇನೆ. ಅಪ್ಪ, ಅಮ್ಮನಿಂದ ಹಲವಾರು ನೂರು ಕಿಲೋಮೀಟರ್ಗಳಷ್ಟು ದೂರದಲ್ಲಿದ್ದೇನೆ. ದಿನವೂ ದೂರವಾಣಿಯಲ್ಲಿ ಮಾತುಕಥೆ ನಡಿಯುತ್ತದೆ. ನನ್ನ ಹಲವು ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುತ್ತೇನೆ. ಆದರೆ ನನ್ನ ಕೆಲವು ನಿರ್ಧಾರಗಳು ನನಗೆ ಖುಶಿ ಕೊಟ್ಟರೂ, ನನ್ನಪ್ಪ, ಅಮ್ಮನಿಗೆ ಖುಶಿ ಕೊಡುವ ನಿರ್ಧಾರಗಳಲ್ಲ. ಹಾಗೇ ಅವುಗಳನ್ನ ಬದಲಿಸಲೂ ಅಗುವುದಿಲ್ಲ. ನನ್ನ ಆನಂದಕ್ಕಾಗಿ ತಮ್ಮ ಬಗೆಗೆ ವಿಚಾರ ಮಾಡದ ಅವರಿಗಾಗಿ ನನ್ನ ಆಸೆಗಳನ್ನು ಬಲಿಗೊಡಲೇ?? ಅಥವಾ ಅವರ ಖುಷಿಯನ್ನೇ ನನ್ನದೆಂದು ತಿಳೆಯಲೇ ಎಂಬ ಹಪತಪಿಯಲ್ಲಿರುವ,

-ಕಾವ್ಯಧಾರೆ 

4 comments:

  1. ಈ ತೊಳಲಾಟ... ಬಹುಶಃ ನನ್ನನ್ನು ನಿಮ್ಮನ್ನು ಸೇರಿದಂತೆ ಬಹಳ ಹುಡುಗಿಯರಿಗೇ ಇರುವುದೇ...!
    ನಾವುಗಳು ನಮ್ಮ ಸಂತೋಷವನ್ನು ಇನ್ನೊಂದು ಕಾರಣಕ್ಕೆ ಹಾಳುಗೆಡವಲಾರೆವು.. ಅದು ಹೆತ್ತವರು, ಸ್ನೇಹಿತರು ಯಾರಗಿದ್ದರೂ ಸೈ ..
    ಆದರೂ ಕೆಲವೊಂದು ಬದುಕಿನ ಪ್ರಮುಖ ನಿರ್ಧಾರಗಳನ್ನು ಹೆತ್ತರೊಂದಿಗೆ ಚರ್ಚಿಸಿ ನಿರ್ಧರಿಸಿದರೆ ಕಿರಿಯರಾದ ನಮಗೂ ಒಳ್ಳೆಯದು.. ಹಿರಿಯರಿಗೂ ಸಂತೋಷ. ಏನಂತೀರಿ ...? ;)

    ಬ್ಲಾಗ್ ಲೋಕಕ್ಕೆ ಹೊಸದಾಗಿ ಸೇರ್ಪಡೆಗೊಳ್ಳುತ್ತಿದ್ದಿರಿ.. ನಿಮಗೆ ಯಶಸ್ಸಾಗಲಿ...
    All the very Best...

    ReplyDelete
    Replies
    1. ಕಾಲೈ ತಸ್ಮೈ ನಮಃ..!
      ಧನ್ಯವಾದಗಳು..:)

      Delete
  2. ಬಳ್ಳಿ ಬೆಳೆದಾಗೆಲ್ಲ..ತಾನು ತಬ್ಬಿ ಹಬ್ಬಿದ್ದ ಮರವನ್ನು ಬಿಟ್ಟು ದೂರಕ್ಕೆ ಕೈ ಚಾಚುತ್ತದೆ.ಇದು ತಪ್ಪಲ್ಲಾ..ಆ ಮರಕ್ಕೆ ಬಳ್ಳಿ ಆಸರೆ ಬಳ್ಳಿಗೆ ಮರದ ಆಸರೆ..ದೂರಕ್ಕೆ ಕೈಚಾಚಿ ವಿಕಸಿತವಾದರೂ ತವರಿನ ಮರದ ಹಂಬಲ, ಬೆಂಬಲ ಸದಾ ಬೆನ್ನನ್ನು ಕಾಯುತ್ತದೆ. ತೊಳಲಾಟ ಸುಂದರವಾಗಿ ವ್ಯಕ್ತವಾಗಿದೆ.ಅಭಿನಂದನೆಗಳು

    ReplyDelete